ಕರ್ನಾಟಕದ ರಾಜಕೀಯ ವಲಯದಲ್ಲಿ ಇದೀಗ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಯ ಅಂಕಿ-ಅಂಶಗಳು ರಾಜಕೀಯ ಲೆಕ್ಕಾಚಾರಕ್ಕೆ ಹೊಸ ತಿರುವು ನೀಡಿವೆ. ರಾಜ್ಯದ ಬರೋಬ್ಬರಿ 192 ಕ್ಷೇತ್ರಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತದಾರರ ಹೆಸರುಗಳು ಡಿಲೀಟ್ ಆಗಿವೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಎಸ್ಐಆರ್ ವಿರೋಧಿ ಒಕ್ಕೂಟದ ಭಾಗವಾಗಿರುವ ‘ಮತ ಕಾವಲು ಸಮಿತಿ’ ರಾಜ್ಯದ 224 ಕ್ಷೇತ್ರಗಳ ದತ್ತಾಂಶವನ್ನು ಸಂಗ್ರಹಿಸಿ ಈ ಮಾಹಿತಿ ಬಹಿರಂಗಪಡಿಸಿದೆ. ಸಮಿತಿಯ ಪ್ರಕಾರ, ಕಾಂಗ್ರೆಸ್ ಗೆದ್ದಿರುವ 135 ಕ್ಷೇತ್ರಗಳ ಪೈಕಿ 115 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತಗಳು ಡಿಲೀಟ್ ಆಗಿವೆ. ಬಿಜೆಪಿ ಗೆದ್ದಿರುವ 66 ಕ್ಷೇತ್ರಗಳ ಪೈಕಿ 58 ಕ್ಷೇತ್ರಗಳಲ್ಲೂ ಇದೇ ಪರಿಸ್ಥಿತಿ ಇದೆ. ಇನ್ನು ಜೆಡಿಎಸ್ ಗೆದ್ದಿರುವ 19 ಕ್ಷೇತ್ರಗಳಲ್ಲೂ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಮತದಾರರ ಹೆಸರುಗಳು ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿವೆ.
ರಾಜ್ಯದಲ್ಲಿ ಒಟ್ಟು 99.3 ಲಕ್ಷ ಮತದಾರರ ಹೆಸರುಗಳು ಡಿಲೀಟ್ ಆಗಿರುವುದು ಈ ಚರ್ಚೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಅರ್ಹ ಮತದಾರರು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗದಿದ್ದರೆ 2028ರ ಚುನಾವಣೆಯಲ್ಲಿ ಇದರ ಪರಿಣಾಮ ಎದುರಾಗುವ ಸಾಧ್ಯತೆ ಇದೆ.
ವಿಶೇಷವಾಗಿ 2023ರಲ್ಲಿ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಕಾಂಗ್ರೆಸ್ನ ಸುಮಾರು 97 ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರ ಬದಲಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಆದರೆ ಈ ಬೆಳವಣಿಗೆಯಿಂದ ಯಾವ ಪಕ್ಷಕ್ಕೆ ಹೆಚ್ಚು ನಷ್ಟವಾಗಲಿದೆ ಎಂಬುದನ್ನು ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಏಕೆಂದರೆ ಡಿಲೀಟ್ ಆಗಿರುವ ಮತದಾರರು ಯಾವ ಪಕ್ಷದ ಬೆಂಬಲಿಗರು ಎಂಬುದು ಸ್ಪಷ್ಟವಾಗಿಲ್ಲ.
ಒಟ್ಟಿನಲ್ಲಿ, ಮತದಾರರ ಪಟ್ಟಿಗೆ ಅರ್ಹ ಮತದಾರರ ಮರುಸೇರ್ಪಡೆ, ಮತದಾರರ ಹಕ್ಕುಗಳ ರಕ್ಷಣೆ ಮತ್ತು ಪಾರದರ್ಶಕ ಪರಿಷ್ಕರಣೆ ಈಗ ಪ್ರಮುಖ ಪ್ರಶ್ನೆಗಳಾಗಿವೆ. 99.3 ಲಕ್ಷ ಮತಗಳ ಲೆಕ್ಕಾಚಾರ 2028ರ ಚುನಾವಣೆಯ ಫಲಿತಾಂಶದ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.



