ಯಾರು ಈ ಅಲೀಸ್ ಹುವಾಂಗ್? ಎನ್‌ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಸುತ್ತ ಗುಪ್ತಚರ ನಂಟಿನ ಅನುಮಾನ!ವಿಶ್ವದ ಶ್ರೀಮಂತ ಟೆಕ್ ಉದ್ಯಮಿಗಳಲ್ಲಿ ಒಬ್ಬರು.. ಜಗತ್ತಿನ AI ಚಿಪ್ ಸಾಮ್ರಾಜ್ಯದ ಅಧಿಪತಿ.. ಎನ್‌ವಿಡಿಯಾ ಕಂಪನಿಯ CEO ಜೆನ್ಸನ್ ಹುವಾಂಗ್! ಆದ್ರೆ ಈಗ ಇದೇ ಜೆನ್ಸನ್ ಹುವಾಂಗ್ ಅವರ ವೈಯಕ್ತಿಕ ಜೀವನ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
CEO ಜೊತೆ ಆಪ್ತ ಸಂಬಂಧ.. ಚೀನಾ ಗುಪ್ತಚರ ಸಂಸ್ಥೆಯ ಜೊತೆ ನಂಟಿನ ಅನುಮಾನ.. ಬರೋಬ್ಬರಿ 4.8 ಬಿಲಿಯನ್ ಡಾಲರ್ ಚಿಪ್ ವ್ಯವಹಾರದ ಸುತ್ತ ವಿವಾದ! ಹಾಗಾದ್ರೆ ಯಾರು ಈ ಅಲೀಸ್ ಹುವಾಂಗ್? ಆಕೆಯ ಹಿನ್ನೆಲೆ ಏನು? ಈ ಸಂಬಂಧದ ಹಿಂದೆ ಚೀನಾದ ಗುಪ್ತಚರ ಜಾಲದ ಕೈವಾಡ ಇದೆಯಾ? ಇಲ್ಲಿದೆ ಒಂದು ಕುತೂಹಲಕಾರಿ ಮಿಸ್ಟರಿ ಪ್ರೊಫೈಲ್!
ಅಲೀಸ್ ಹುವಾಂಗ್.. ಮತ್ತೊಂದು ಹೆಸರು ಹುವಾಂಗ್ ಲೀ! ಚೀನಾದ ಪ್ರಜೆಯಾಗಿರುವ ಈ ಮಹಿಳೆ ಸಿಂಗಾಪುರ ಮೂಲದ ಮೆಗಾಸ್ಪೀಡ್ ಇಂಟರ್‌ನ್ಯಾಷನಲ್ ಎಂಬ ಡೇಟಾ ಸೆಂಟರ್ ಕಂಪನಿಯ ಮಾಜಿ ಉನ್ನತ ಅಧಿಕಾರಿ. ಎನ್‌ವಿಡಿಯಾ ಕಂಪನಿಯ AI ಚಿಪ್‌ಗಳ ಖರೀದಿ ಮತ್ತು ಡೇಟಾ ಸೆಂಟರ್ ವ್ಯವಹಾರದಲ್ಲಿ ಈ ಕಂಪನಿ ಗುರುತಿಸಿಕೊಂಡಿತ್ತು. 2023ರಲ್ಲಿ ಮೆಗಾಸ್ಪೀಡ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಅಲೀಸ್ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ.
ಇನ್ನು ಅಲೀಸ್ ಹುವಾಂಗ್ ಮತ್ತು ಎನ್‌ವಿಡಿಯಾ CEO ಜೆನ್ಸನ್ ಹುವಾಂಗ್ ನಡುವಿನ ಆಪ್ತ ಸಂಬಂಧದ ವಿಚಾರ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 2025ರ ಮೇ ತಿಂಗಳಲ್ಲಿ ತೈವಾನ್‌ನ ತೈಪೆಯಲ್ಲಿ ನಡೆದ ಟೆಕ್ ಉದ್ಯಮದ ಔತಣಕೂಟದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಜೆನ್ಸನ್ ಹುವಾಂಗ್ ತಮ್ಮ ಉದ್ಯೋಗಿಗಳಿಗೆ ಬರೆದ ಸಂದೇಶದಲ್ಲಿ ಪತ್ನಿಗೆ ದ್ರೋಹ ಮಾಡಿದ್ದಾಗಿ ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ. ಆದರೆ ಆ ಸಂದೇಶದಲ್ಲಿ ಮಹಿಳೆಯ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ.
ಇದರ ನಡುವೆ ಅಲೀಸ್ ಹುವಾಂಗ್ ಚೀನಾದ ಗುಪ್ತಚರ ಸಂಸ್ಥೆ MSS ಪರವಾಗಿ ಕೆಲಸ ಮಾಡುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಅಮೆರಿಕದ ಗುಪ್ತಚರ ಮೂಲಗಳ ಮಾಹಿತಿಯನ್ನು ಆಧರಿಸಿ ಹಲವು ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಜೆನ್ಸನ್ ಹುವಾಂಗ್ ಅವರಿಂದ ಎನ್‌ವಿಡಿಯಾದ ತಂತ್ರಜ್ಞಾನ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವ ಉದ್ದೇಶವಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ.
ಇನ್ನೊಂದು ಕಡೆ ಮೆಗಾಸ್ಪೀಡ್ ಕಂಪನಿಯ ಸುತ್ತಲೂ ಚಿಪ್ ವ್ಯವಹಾರದ ವಿವಾದ ಸೃಷ್ಟಿಯಾಗಿದೆ. ಸುಮಾರು 4.8 ಬಿಲಿಯನ್ ಡಾಲರ್ ಮೌಲ್ಯದ ಎನ್‌ವಿಡಿಯಾ ಚಿಪ್‌ಗಳನ್ನು ಒಳಗೊಂಡ ಉಪಕರಣಗಳ ಖರೀದಿ ಮತ್ತು ಚೀನಾಕ್ಕೆ ತಂತ್ರಜ್ಞಾನ ವರ್ಗಾವಣೆಯ ಅನುಮಾನದ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಎನ್‌ವಿಡಿಯಾದ ನಿರ್ದೇಶಕರ ಮಂಡಳಿ ಸ್ವತಂತ್ರ ತನಿಖೆಗೆ ಮುಂದಾಗಿದೆ. ಜೆನ್ಸನ್ ಹುವಾಂಗ್ ಕೂಡ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಆದರೆ ಇಲ್ಲಿ ಮತ್ತೊಂದು ಮಹತ್ವದ ಸಂಗತಿಯಿದೆ. ಸಿಂಗಾಪುರ ಸರ್ಕಾರ ಅಲೀಸ್ ಹುವಾಂಗ್ ವಿರುದ್ಧ ತನ್ನ ಅಧಿಕಾರಿಗಳು ಯಾವುದೇ ಗುಪ್ತಚರ ತನಿಖೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ. ಚೀನಾ ಕೂಡ ಗೂಢಚಾರಿಕೆಯ ಆರೋಪಗಳನ್ನು ತಳ್ಳಿಹಾಕಿದೆ. ಎನ್‌ವಿಡಿಯಾ ಕೂಡ ಕಂಪನಿಯ ರಹಸ್ಯ ಮಾಹಿತಿ ಅಥವಾ ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗಿದೆ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಕಾರಣವಿಲ್ಲ ಎಂದು ಹೇಳಿದೆ.
ಹಾಗಾದರೆ ಇದು ಕೇವಲ ವೈಯಕ್ತಿಕ ಸಂಬಂಧದ ವಿವಾದವಾ? ಅಥವಾ ಜಾಗತಿಕ AI ತಂತ್ರಜ್ಞಾನ ಸಾಮ್ರಾಜ್ಯದ ಸುತ್ತ ನಡೆದಿದೆಯಾ ಗುಪ್ತಚರ ಆಟ? ತನಿಖೆಯ ಫಲಿತಾಂಶದಲ್ಲೇ ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.



