ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಮತ್ತು ಸಂಜೆ ವೇಳೆಗೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ನಗರದ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಎಲ್ಲಿ ಏನೆಲ್ಲಾ ಆಯ್ತು?
ಭಾರಿ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ನದಿಯಂತೆ ಹರಿದಿದೆ. ಕೆ.ಆರ್. ಪುರಂ ಮೆಟ್ರೋ ನಿಲ್ದಾಣ, ಟಿನ್ ಫ್ಯಾಕ್ಟರಿ, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಯಶವಂತಪುರ, ಟಿಸಿ ಪಾಳ್ಯ, ಜಕ್ಕೂರು, ಮತ್ತು ಹೆಬ್ಬಾಳ ಮುಂತಾದ ಕಡೆಗಳಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ಕೆ ಆರ್ ಪುರಂ ಭಾಗ ಸೇರಿದಂತೆ ಗೆದ್ದಲಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ಹೆಣ್ಣೂರು ಕಡೆಗೆ ಹೋಗುವ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿತು. ಹಲಸೂರ್ ಬಳಿ ಹಳೇ ಮದ್ರಾಸ್ ರಸ್ತೆಯಲ್ಲೂ ನೀರು ತುಂಬಿ ಸಂಚಾರ ಕಷ್ಟಕರವಾಗಿತ್ತು.
ಮಧ್ಯಾಹ್ನದ ವೇಳೆಗೆ ಇದ್ದಕ್ಕಿದ್ದಂತೆ ಮೋಡ ಕವಿದ ಕಾರಣ ಕತ್ತಲೆಯ ವಾತಾವರಣ ನಿರ್ಮಾಣ ಆಗಿತ್ತು. ಭಾರಿ ಮಳೆ ಸುರಿದಿದ್ದರಿಂದ ರಸ್ತೆ ಸರಿಯಾಗಿ ಕಾಣಿಸದೆ ಸವಾರರು ಹೆಡ್ಲೈಟ್ ಆನ್ ಮಾಡಿಕೊಂಡು ಚಲಿಸಬೇಕಾಯಿತು.
ನಗರದ ಹಲವು ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ಹೂಡಿ ರೈಲ್ವೆ ಅಂಡರ್ಪಾಸ್ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಬಿಬಿಎಂಪಿ ಸಿಬ್ಬಂದಿ ಪಂಪ್ಗಳ ಮೂಲಕ ನೀರನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.
ಇನ್ನು ಎಷ್ಟು ದಿನ ಮಳೆ?
ಹವಾಮಾನ ಮುನ್ಸೂಚನೆ ಪ್ರಕಾರ, ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಅಂದರೆ ಅಕ್ಟೋಬರ್ 5 ಮತ್ತು 6 ರಂದು ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆ ಮುಂದುವರಿಯಲಿದೆ. ಅಕ್ಟೋಬರ್ 7 ರಿಂದ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗಲಿದ್ದು, ವಾರದ ಉಳಿದ ದಿನಗಳಲ್ಲಿ ಮೋಡ ಕವಿದ ವಾತಾವರಣ ಅಥವಾ ಸಾಧಾರಣ ಮಳೆಯಷ್ಟೇ ಇರಲಿದೆ.
ಆದಾಗ್ಯೂ, ಒಟ್ಟಾರೆ ಹವಾಮಾನ ಮುನ್ಸೂಚನೆಗಳ ಪ್ರಕಾರ ಅಕ್ಟೋಬರ್ ಮಧ್ಯಭಾಗದವರೆಗೆ ರಾಜ್ಯದ ವಿವಿಧ ಭಾಗಗಳೊಂದಿಗೆ ಬೆಂಗಳೂರಿನಲ್ಲೂ ಸಾಂದರ್ಭಿಕವಾಗಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.



