ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಜನಪ್ರಿಯತೆ ಗಳಿಸುವುದು ಈಗ ಸಾಮಾನ್ಯ. ಐಷಾರಾಮಿ ಕಾರುಗಳು, ಮೈತುಂಬಾ ಚಿನ್ನಾಭರಣ, ಕೈಯಲ್ಲಿ ಕಂತೆ ಕಂತೆ ಹಣ, ಬಡವರಿಗೆ ಸಹಾಯ ಮಾಡುವ ವಿಡಿಯೋಗಳು… ಇಂತಹ ದೃಶ್ಯಗಳನ್ನು ನೋಡಿ ಅನೇಕರು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳನ್ನು ನಂಬುತ್ತಾರೆ. ಆದರೆ ಇದೇ ಜನಪ್ರಿಯತೆಯನ್ನು ಬಳಸಿಕೊಂಡು ಹಣ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ಚಿತ್ರದುರ್ಗ ಮೂಲದ ಅರುಣ್ ಕಟಾರೆ ಎಂಬ ಇನ್ಸ್ಟಾಗ್ರಾಂ ರೀಲ್ಸ್ ಕ್ರಿಯೇಟರ್ ವಿರುದ್ಧ ಹಣಕಾಸು ವಂಚನೆ, ಹಣ ವಾಪಸ್ ಕೇಳಿದವರಿಗೆ ಬೆದರಿಕೆ ಹಾಗೂ ಅನುಮಾನಾಸ್ಪದ ಲಿಂಕ್ಗಳ ಮೂಲಕ ಹಣ ಸಂಗ್ರಹಿಸುತ್ತಿರುವ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಕೆಲವರು ಮಾಡಿರುವ ಆರೋಪಗಳು ಮತ್ತು ಲಭ್ಯವಿದೆ ಎನ್ನಲಾದ ಆಡಿಯೋ ಸಂಭಾಷಣೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಅರುಣ್ ಕಟಾರೆ ವಂಚನೆಗೆ ಸಂಬಂಧಿಸಿದ ಆಡಿಯೋ ತುಣುಕು ನೇಷನ್ ನ್ಯೂಸ್ ಕನ್ನಡಕ್ಕೆ ಲಭ್ಯ ಆಗಿದೆ..
₹2 ಸಾವಿರ ಕೊಟ್ಟರೆ ₹25-30 ಸಾವಿರ ರಿಟರ್ನ್?
ಅರುಣ್ ಕಟಾರೆ ವಿರುದ್ಧ ಕೇಳಿಬರುತ್ತಿರುವ ಪ್ರಮುಖ ಆರೋಪವೆಂದರೆ ಕಡಿಮೆ ಮೊತ್ತದ ಹಣ ಪಡೆದು ಅದಕ್ಕೆ ಹಲವು ಪಟ್ಟು ಹಣ ಮರಳಿಸುವ ಆಮಿಷವೊಡ್ಡುವುದು. ₹2 ಸಾವಿರ ಕಳುಹಿಸಿದರೆ ₹25 ಸಾವಿರದಿಂದ ₹30 ಸಾವಿರದವರೆಗೆ ವಾಪಸ್ ನೀಡುವುದಾಗಿ ಭರವಸೆ ನೀಡಲಾಗುತ್ತಿತ್ತು.
ಇನ್ಸ್ಟಾಗ್ರಾಂನಲ್ಲಿ ಫಾಲೋವರ್ಸ್ಗಳೊಂದಿಗೆ ಸಂಪರ್ಕ ಸಾಧಿಸಿ, ಲಿಂಕ್ ಕಳುಹಿಸಿ ಹಣ ವರ್ಗಾಯಿಸುವಂತೆ ಕೇಳಲಾಗುತ್ತಿತ್ತು. ಆದರೆ ₹2 ಸಾವಿರ ಕಳುಹಿಸಿದ ಬಳಿಕ ಭರವಸೆ ನೀಡಿದ ಹಣ ಕಳಿಸುತ್ತಿರಲಿಲ್ಲ. ಇದರಿಂದ ಆಸೆಗೆ ಬಿದ್ದು ಹಣ ಹೂಡಿದವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಣ ವಾಪಸ್ ಕೇಳಿದರೆ ಪೆಂಡಿಂಗ್ ಎಂಬ ಉತ್ತರ!
ಹಣ ಕಳುಹಿಸಿದವರು ತಮ್ಮ ಹಣವನ್ನು ವಾಪಸ್ ಕೇಳಿದಾಗ ಪಾವತಿ ಪೆಂಡಿಂಗ್ನಲ್ಲಿದೆ ಎಂದು ಹೇಳಿ ಅರುಣ್ ಕಟಾರೆ ಕಾಲಹರಣ ಮಾಡುತ್ತಿದ್ದಾರೆ.ಕೆಲವರ ಪ್ರಕಾರ, ₹1,999 ಪೂರ್ಣ ಮೊತ್ತವನ್ನು ಪಾವತಿಸಿದರೆ ಮಾತ್ರ ₹25 ಸಾವಿರದಿಂದ ₹30 ಸಾವಿರದವರೆಗೆ ಹಣ ಸಿಗುತ್ತದೆ ಎಂದು ಮತ್ತಷ್ಟು ಹಣ ಕೇಳಲಾಗುತ್ತಿತ್ತು ಎನ್ನಲಾಗಿದೆ. ತಾವು ಕಳುಹಿಸಿದ ಹಣವನ್ನಾದರೂ ಹಿಂದಿರುಗಿಸುವಂತೆ ಕೇಳಿದಾಗ ಅರುಣ್ ಕಟಾರೆ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂಬುದು ದೂರುದಾರರ ಅಳಲು.
ಹಣ ವರ್ಗಾವಣೆ ಬಳಿಕ ಅವರ ಮೊಬೈಲ್ ನಂಬರ್ಗಳನ್ನು ಬ್ಲಾಕ್ ಮಾಡಲಾಗುತ್ತದೆ. ಬೇರೆ ನಂಬರ್ ನಿಂದ ಕರೆ ಮಾಡಿ ಹಣ ವಾಪಸ್ ಕೇಳಿದವರಿಗೆ ಬೆದರಿಕೆ ಹಾಕಲಾಗುತ್ತಿದೆ. ಈ ವಿಚಾರವನ್ನು ಬೇರೆಯವರಿಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕೆಲವು ಆಡಿಯೋ ಸಂಭಾಷಣೆಗಳಲ್ಲಿ ಹಣ ಕೇಳುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾತುಗಳಿವೆ ಎನ್ನಲಾಗುತ್ತಿದೆ. ಎರಡು ಸಾವಿರ ರೂಪಾಯಿ ಹಣ ವಾಪಸ್ ಕೇಳಿದರೂ ಗಂಭೀರ ಬೆದರಿಕೆ ಹಾಕಲಾಗಿದೆ ಎಂಬ ದೂರುಗಳಿವೆ.
ರೀಲ್ಸ್ನಲ್ಲಿ ಐಷಾರಾಮಿ ಲೈಫ್ಸ್ಟೈಲ್; ಹಣದ ಮೂಲ ಯಾವುದು?
ಅರುಣ್ ಕಟಾರೆ ಸೋಷಿಯಲ್ ಮೀಡಿಯಾ ವಿಡಿಯೋಗಳಲ್ಲಿ ಐಷಾರಾಮಿ ಕಾರುಗಳು, ಚಿನ್ನಾಭರಣ ಮತ್ತು ಹಣದ ಪ್ರದರ್ಶನ ಕಂಡುಬರುತ್ತದೆ. ಜೊತೆಗೆ ಜನರಿಗೆ ಸಹಾಯ ಮಾಡುವ ವಿಡಿಯೋಗಳನ್ನೂ ಹಂಚಿಕೊಳ್ಳಲಾಗುತ್ತದೆ.
ಆದರೆ ಈ ಐಷಾರಾಮಿ ಜೀವನಶೈಲಿಯ ಹಿಂದಿನ ಆದಾಯದ ಮೂಲ ಯಾವುದು? ಹಣಕಾಸಿನ ವ್ಯವಹಾರಗಳು ಕಾನೂನುಬದ್ಧವಾಗಿವೆಯೇ? ಜನರಿಂದ ಸಂಗ್ರಹಿಸಿದ ಹಣದ ಬಳಕೆ ಹೇಗಾಗಿದೆ? ಎಂಬ ಪ್ರಶ್ನೆಗಳು ಎದ್ದಿವೆ.
ಕೆಲವರಿಗೆ ಹಣ ನೀಡಿ ಅವರ ಮೂಲಕ ರೀಲ್ಸ್ ಮಾಡಿಸಿ, ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿರುವಂತೆ ಬಿಂಬಿಸಲಾಗುತ್ತಿದೆ
ಉತ್ತರ ಇಲ್ಲದ ಪ್ರಮುಖ ಪ್ರಶ್ನೆಗಳು
1. ₹2 ಸಾವಿರಕ್ಕೆ ₹25-30 ಸಾವಿರ ನೀಡುವುದಾಗಿ ಭರವಸೆ ನೀಡಿದ ವ್ಯವಹಾರದ ಮೂಲ ಯಾವುದು?
2. ಈ ಹಣಕಾಸಿನ ವ್ಯವಹಾರಗಳಿಗೆ ಬಳಸಿದ ಬ್ಯಾಂಕ್ ಖಾತೆಗಳು ಯಾರ ಹೆಸರಿನಲ್ಲಿವೆ?
3. ಹಣ ಕಳುಹಿಸಿದವರ ಸಂಖ್ಯೆ ಎಷ್ಟು? ಒಟ್ಟು ಎಷ್ಟು ಹಣ ಸಂಗ್ರಹಿಸಲಾಗಿದೆ?
4. ಹಣ ವರ್ಗಾವಣೆಗೆ ಬಳಸಿದ ಲಿಂಕ್ಗಳು ಅಧಿಕೃತ ಪಾವತಿ ಲಿಂಕ್ಗಳೇ ಅಥವಾ ಅನುಮಾನಾಸ್ಪದ ಲಿಂಕ್ಗಳೇ?
5. ಹಣ ಕೇಳಿದವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪದಲ್ಲಿ ಎಷ್ಟು ಸತ್ಯಾಂಶವಿದೆ?
6. ಈ ವ್ಯವಹಾರಗಳ ಹಿಂದೆ ಬೇರೆ ವ್ಯಕ್ತಿಗಳು ಅಥವಾ ಸಂಘಟಿತ ಜಾಲವಿದೆಯೇ?
ಸಾರ್ವಜನಿಕರಿಗೆ ಎಚ್ಚರಿಕೆ: ಹಣದ ಆಮಿಷಕ್ಕೆ ಬಲಿಯಾಗಬೇಡಿ!
ಸೋಷಿಯಲ್ ಮೀಡಿಯಾದಲ್ಲಿ ಕಾಣುವ ಐಷಾರಾಮಿ ಜೀವನಶೈಲಿ, ಕಂತೆ ಕಂತೆ ಹಣದ ಪ್ರದರ್ಶನ ಮತ್ತು ಸಹಾಯ ಮಾಡುವ ವಿಡಿಯೋಗಳನ್ನು ನೋಡಿ ಯಾವುದೇ ವ್ಯಕ್ತಿಯ ಹಣಕಾಸಿನ ಭರವಸೆಯನ್ನು ನಂಬಬಾರದು.
₹2 ಸಾವಿರ ಕೊಟ್ಟು ₹25 ಸಾವಿರ ಅಥವಾ ₹30 ಸಾವಿರ ಪಡೆಯಬಹುದು ಎಂಬ ಅಸಹಜ ಆಮಿಷಗಳಿಗೆ ಮರುಳಾಗಬೇಡಿ. ಅಪರಿಚಿತ ಲಿಂಕ್ಗಳನ್ನು ತೆರೆಯಬೇಡಿ. OTP, UPI PIN, ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಈಗಾಗಲೇ ಹಣ ಕಳೆದುಕೊಂಡಿದ್ದರೆ ಪಾವತಿ ಸ್ಕ್ರೀನ್ಶಾಟ್, ಬ್ಯಾಂಕ್ ಸ್ಟೇಟ್ಮೆಂಟ್, ಚಾಟ್ಗಳು, ಮೊಬೈಲ್ ನಂಬರ್ಗಳು ಮತ್ತು ಆಡಿಯೋ ದಾಖಲೆಗಳಂತಹ ಸಾಕ್ಷ್ಯಗಳನ್ನು ಸಂರಕ್ಷಿಸಿ. ತಕ್ಷಣ 1930 ಸೈಬರ್ ವಂಚನೆ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಮೂಲಕ ದೂರು ದಾಖಲಿಸಿ. ಅಗತ್ಯವಿದ್ದರೆ ಸ್ಥಳೀಯ ಪೊಲೀಸ್ ಠಾಣೆಯನ್ನೂ ಸಂಪರ್ಕಿಸಿ.
ಒಟ್ಟಿನಲ್ಲಿ, ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಜನರ ವಿಶ್ವಾಸ ಗಳಿಸಿ ಹಣದ ಆಮಿಷವೊಡ್ಡಲಾಗುತ್ತಿದೆ ಎಂಬ ಆರೋಪಗಳು ಗಂಭೀರವಾಗಿವೆ. ಅರುಣ್ ಕಟಾರೆ ವಿರುದ್ಧ ಆಡಿಯೋ, ಹಣಕಾಸಿನ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿದಾಗ ಮಾತ್ರ ಈ ಪ್ರಕರಣದ ಹಿಂದಿನ ಸಂಪೂರ್ಣ ಸತ್ಯ ಹೊರಬರಲಿದೆ.



