ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ಪಿಎಫ್ ಹಣಕ್ಕಾಗಿ ಕಾಯುತ್ತಿದ್ದ ನೌಕರರಿಗೆ ಇದೀಗ ದೊಡ್ಡ ರಿಲೀಫ್ ಸಿಗಲಿದೆ. ಉದ್ಯೋಗ ಕಳೆದುಕೊಂಡರೂ ತಮ್ಮದೇ ಪಿಎಫ್ ಹಣ ಪಡೆಯಲು 12 ತಿಂಗಳು ಕಾಯಬೇಕಿದ್ದ ನಿಯಮಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಇನ್ಮುಂದೆ ಕೇವಲ ಎರಡು ತಿಂಗಳಲ್ಲೇ ಪಿಎಫ್ ಹಣ ಪಡೆಯಲು ಅವಕಾಶ ಕಲ್ಪಿಸುವ ಮಹತ್ವದ ನಿರ್ಧಾರಕ್ಕೆ ಅನುಮೋದನೆ ಸಿಕ್ಕಿದೆ.
ಅಷ್ಟೇ ಅಲ್ಲ, ಪಿಎಫ್ ಖಾತೆಯಲ್ಲಿ ಉಳಿಸಬೇಕಾದ ಕನಿಷ್ಠ ಮೊತ್ತವನ್ನು ಕಡಿತಗೊಳಿಸಲಾಗಿದೆ. ನಿವೃತ್ತಿಯ ನಂತರವೂ ಪಿಎಫ್ ಹಣವನ್ನು ಕಂತುಗಳಲ್ಲಿ ಪಡೆಯುವ ಹೊಸ ವ್ಯವಸ್ಥೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. UAN ಖಾತೆಗೆ ನೇರವಾಗಿ ಹಣ ಜಮೆ ಮಾಡುವ ಹೊಸ ವ್ಯವಸ್ಥೆಗೂ ಪ್ರಸ್ತಾವನೆ ರೂಪಿಸಲಾಗಿದೆ.
ನವೆಂಬರ್ 19ರಂದು ನಡೆದ EPFOನ 240ನೇ ಕೇಂದ್ರ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳೇನು? ಇದರಿಂದ ಗಾರ್ಮೆಂಟ್ಸ್ ಕಾರ್ಮಿಕರು ಸೇರಿದಂತೆ ಸಾಮಾನ್ಯ ಉದ್ಯೋಗಿಗಳಿಗೆ ಆಗುವ ಲಾಭಗಳೇನು? ನೋಡೋಣ ಈ ವಿಶೇಷ ವರದಿ.
12 ತಿಂಗಳ ನಿಯಮಕ್ಕೆ ಬ್ರೇಕ್
ಪಿಎಫ್ ಹಣ ವಿತ್ಡ್ರಾ ವಿಚಾರದಲ್ಲಿ ಮೊದಲ ಮತ್ತು ಅತ್ಯಂತ ಪ್ರಮುಖ ಬದಲಾವಣೆ ಎಂದರೆ ಕಾಯುವ ಅವಧಿಯ ಕಡಿತ. ಈ ಹಿಂದೆ ಉದ್ಯೋಗ ಕಳೆದುಕೊಂಡವರು ಅಥವಾ ಕೆಲಸ ತೊರೆದವರು ತಮ್ಮ ಸಂಪೂರ್ಣ ಪಿಎಫ್ ಹಣ ಪಡೆಯಲು 12 ತಿಂಗಳು ಕಾಯಬೇಕಿತ್ತು. ಆದರೆ ಇದೀಗ ಈ ಅವಧಿಯನ್ನು ಎರಡು ತಿಂಗಳಿಗೆ ಇಳಿಸುವ ನಿರ್ಧಾರಕ್ಕೆ CBT ಅನುಮೋದನೆ ನೀಡಿದೆ.
ಅಂದರೆ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಎದುರಾದ ಸಂದರ್ಭದಲ್ಲಿ ತಮ್ಮದೇ ಪಿಎಫ್ ಹಣವನ್ನು ಬೇಗನೆ ಪಡೆಯಲು ಅನುಕೂಲವಾಗಲಿದೆ.
ವಿಶೇಷವಾಗಿ ಗಾರ್ಮೆಂಟ್ಸ್ ಉದ್ಯಮದಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ಉದ್ಯೋಗ ಬದಲಾವಣೆ ಅಥವಾ ಕೆಲಸ ಕಳೆದುಕೊಳ್ಳುವ ಸಂದರ್ಭಗಳಲ್ಲಿ ಈ ನಿಯಮದಿಂದ ಅನುಕೂಲ ಪಡೆಯುವ ನಿರೀಕ್ಷೆಯಿದೆ.
PF ಖಾತೆಯಲ್ಲಿ ಉಳಿಸಬೇಕಾದ ಮೊತ್ತ ಕಡಿತ
ಇನ್ನೊಂದು ಮಹತ್ವದ ಬದಲಾವಣೆ ಪಿಎಫ್ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ನಿಯಮಕ್ಕೆ ಸಂಬಂಧಿಸಿದ್ದು.ಈ ಹಿಂದೆ ಸದಸ್ಯರ ಪಿಎಫ್ ಖಾತೆಯಲ್ಲಿ ಶೇ.25ರಷ್ಟು ಮೊತ್ತವನ್ನು ಕನಿಷ್ಠ ಬ್ಯಾಲೆನ್ಸ್ ಆಗಿ ಉಳಿಸಬೇಕಿತ್ತು. ಇದೀಗ ಈ ಪ್ರಮಾಣವನ್ನು ಶೇ.10ಕ್ಕೆ ಇಳಿಸಲು ಅನುಮೋದನೆ ನೀಡಲಾಗಿದೆ.
ಇದರಿಂದ ಅರ್ಹ ಸದಸ್ಯರಿಗೆ ತಮ್ಮ ಪಿಎಫ್ ಉಳಿತಾಯದ ಹೆಚ್ಚಿನ ಭಾಗವನ್ನು ಪಡೆಯಲು ಅವಕಾಶ ಸಿಗಲಿದೆ.ಸರಳವಾಗಿ ಹೇಳಬೇಕೆಂದರೆ, ಶೇ.25ರಷ್ಟು ಹಣವನ್ನು ಕಡ್ಡಾಯವಾಗಿ ಉಳಿಸಬೇಕಿದ್ದ ನಿಯಮ ಬದಲಾಗಿದ್ದು, ಇನ್ನು ಶೇ.10ರಷ್ಟು ಕನಿಷ್ಠ ಮೊತ್ತ ಉಳಿಸುವ ವ್ಯವಸ್ಥೆ ಬರಲಿದೆ. ಇದರಿಂದ ಹಣದ ಅವಶ್ಯಕತೆ ಇರುವ ಉದ್ಯೋಗಿಗಳಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯ ಸಿಗಲಿದೆ.
ನಿವೃತ್ತರಿಗೆ ಹೊಸ ಆದಾಯದ ವ್ಯವಸ್ಥೆ
ಇಲ್ಲಿದೆ ನಿವೃತ್ತ ಉದ್ಯೋಗಿಗಳಿಗೆ ಮತ್ತೊಂದು ದೊಡ್ಡ ಗುಡ್ ನ್ಯೂಸ್!ಸಾಮಾನ್ಯವಾಗಿ ಉದ್ಯೋಗಿಗಳು ನಿವೃತ್ತರಾದಾಗ ತಮ್ಮ ಪಿಎಫ್ ಹಣವನ್ನು ಒಮ್ಮೆಲೇ ವಿತ್ಡ್ರಾ ಮಾಡಿಕೊಳ್ಳುತ್ತಾರೆ. ಆದರೆ ಇನ್ಮುಂದೆ ಸಂಪೂರ್ಣ ಹಣವನ್ನು ಒಂದೇ ಬಾರಿಗೆ ಪಡೆಯುವ ಬದಲು ಕಂತುಗಳಲ್ಲಿ ಪಡೆಯುವ ಅವಕಾಶ ಕಲ್ಪಿಸುವ Systematic Withdrawal Plan ಅಂದರೆ SWP ವ್ಯವಸ್ಥೆಗೆ ಅನುಮೋದನೆ ನೀಡಲಾಗಿದೆ.
ಈ ವ್ಯವಸ್ಥೆಯಲ್ಲಿ ನಿವೃತ್ತ ಉದ್ಯೋಗಿಗಳು ತಮ್ಮ ಆಯ್ಕೆಗೆ ಅನುಗುಣವಾಗಿ ಮಾಸಿಕ, ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಹಣ ಪಡೆಯಬಹುದು.ಇಲ್ಲಿ ಮತ್ತೊಂದು ವಿಶೇಷ ಏನೆಂದರೆ, ಪಿಎಫ್ ಖಾತೆಯಲ್ಲಿ ಉಳಿದಿರುವ ಹಣದ ಮೇಲೆ ಬಡ್ಡಿ ಆದಾಯ ಮುಂದುವರಿಯಲಿದೆ.
ಒಂದು ವೇಳೆ ಕಂತುಗಳಲ್ಲಿ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ಸದಸ್ಯ ಮೃತಪಟ್ಟರೆ, ಉಳಿದ ಹಣವನ್ನು ನಾಮಿನಿ ಅಥವಾ ಅವಲಂಬಿತರು ಪಡೆಯಬಹುದು ಅಥವಾ ಕಂತುಗಳನ್ನು ಮುಂದುವರಿಸಬಹುದು. ಆರಂಭಿಕ ಹಂತದಲ್ಲಿ 55 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಐದು ಲಕ್ಷ ರೂಪಾಯಿಗಿಂತ ಹೆಚ್ಚಿನ ಪಿಎಫ್ ಉಳಿತಾಯ ಹೊಂದಿರುವ ಸುಮಾರು 6.32 ಲಕ್ಷ ಸದಸ್ಯರಿಗೆ ಈ ಯೋಜನೆಯಿಂದ ಪ್ರಯೋಜನವಾಗುವ ನಿರೀಕ್ಷೆಯಿದೆ.
UAN ಖಾತೆಗೆ ನೇರ ಹಣ ಜಮೆ
ಇನ್ನು ಪಿಎಫ್ ವ್ಯವಸ್ಥೆಯಲ್ಲಿ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ EPFO. ಸಾಂಪ್ರದಾಯಿಕ ಉದ್ಯೋಗದಾತರ ವೇತನ ಪ್ರಕ್ರಿಯೆಯ ಹೊರತಾಗಿಯೂ UAN ಖಾತೆಗೆ ಸ್ವಯಂಪ್ರೇರಿತವಾಗಿ ಹಣ ಜಮೆ ಮಾಡುವ ವ್ಯವಸ್ಥೆ ರೂಪಿಸಲು ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಅಷ್ಟೇ ಅಲ್ಲ, ಗ್ರಾಹಕರು ನೀಡುವ ಟಿಪ್ಸ್, ಉಡುಗೊರೆ ಮತ್ತು ಇತರ ಸಣ್ಣ ಮೊತ್ತದ ಕೊಡುಗೆಗಳನ್ನು ಮೂರನೇ ವ್ಯಕ್ತಿಗಳ ಮೂಲಕ UAN ಖಾತೆಗೆ ಜಮೆ ಮಾಡುವ ವ್ಯವಸ್ಥೆಯನ್ನೂ ಪ್ರಸ್ತಾಪಿಸಲಾಗಿದೆ. ಇದರಿಂದ ಗಿಗ್ ವರ್ಕರ್ಸ್, ಪ್ಲಾಟ್ಫಾರ್ಮ್ ಉದ್ಯೋಗಿಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೂ ಭವಿಷ್ಯದಲ್ಲಿ ಪಿಎಫ್ ಮಾದರಿಯ ಸಾಮಾಜಿಕ ಭದ್ರತೆ ವಿಸ್ತರಿಸುವ ಉದ್ದೇಶವಿದೆ.
ಕಂಪನಿಗಳಿಗೂ ಹೊಸ ನಿಯಮ
ಇನ್ನು ಉದ್ಯೋಗಿಗಳಿಗೆ ಮಾತ್ರವಲ್ಲ, ಕಂಪನಿಗಳಿಗೂ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
EDLI ಯೋಜನೆಯಡಿ ಕೆಲವು ಅರ್ಹ ಸಂಸ್ಥೆಗಳಿಗೆ ಅವಧಿ ಮುಗಿದ ವಿನಾಯಿತಿಗಳನ್ನು ನವೀಕರಿಸಿಕೊಳ್ಳಲು ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ನಿರ್ದಿಷ್ಟ ಷರತ್ತುಗಳನ್ನು ಪೂರೈಸುವ ಸಂಸ್ಥೆಗಳಿಗೆ ಪರಿವರ್ತನಾ ಅವಧಿಯ ಬಾಕಿ ಕೊಡುಗೆ, ಬಡ್ಡಿ ಮತ್ತು ದಂಡದಲ್ಲಿ ಪರಿಹಾರ ನೀಡುವ ನಿರ್ಧಾರಕ್ಕೂ ಅನುಮೋದನೆ ಸಿಕ್ಕಿದೆ.
PF ಹೂಡಿಕೆಯಲ್ಲೂ ಬದಲಾವಣೆ
EPFO ತನ್ನ ಹೂಡಿಕೆ ನೀತಿಯಲ್ಲೂ ಹೊಸ ಹೆಜ್ಜೆ ಇಟ್ಟಿದೆ. ಅರ್ಹ ಪರ್ಯಾಯ ಹೂಡಿಕೆ ನಿಧಿಗಳಲ್ಲಿ ಅಂದರೆ AIFಗಳಲ್ಲಿ ಹೊಸದಾಗಿ ಸಂಗ್ರಹವಾಗುವ ಹಣದ ಶೇ.3ರವರೆಗೆ ಹೂಡಿಕೆ ಮಾಡಲು ತಾತ್ವಿಕ ಅನುಮೋದನೆ ನೀಡಲಾಗಿದೆ. ಆರಂಭದಲ್ಲಿ ಸರ್ಕಾರದ ಬೆಂಬಲ ಹೊಂದಿರುವ ಸಂಸ್ಥೆಗಳ ಮೂಲಕ ಈ ಹೂಡಿಕೆ ನಡೆಯಲಿದೆ.ಇದು ಪಿಎಫ್ ಹಣದ ಹೂಡಿಕೆಯನ್ನು ವೈವಿಧ್ಯಗೊಳಿಸುವ ಉದ್ದೇಶ ಹೊಂದಿದೆ.
ಕ್ಲೇಮ್ ವಿಲೇವಾರಿಯಲ್ಲಿ ವೇಗ
ಇನ್ನು EPFOನ ಡಿಜಿಟಲ್ ವ್ಯವಸ್ಥೆಯ ಸುಧಾರಣೆಯಿಂದ ಪಿಎಫ್ ಕ್ಲೇಮ್ ಪ್ರಕ್ರಿಯೆಯಲ್ಲೂ ಬದಲಾವಣೆ ಕಂಡುಬಂದಿದೆ. ಸ್ವಯಂಚಾಲಿತ ಕ್ಲೇಮ್ ಪ್ರಕ್ರಿಯೆ ಶೇ.39ರಿಂದ ಶೇ.71ಕ್ಕೆ ಏರಿಕೆಯಾಗಿದೆ. ಕ್ಲೇಮ್ ತಿರಸ್ಕಾರದ ಪ್ರಮಾಣ ಶೇ.23ರಿಂದ ಶೇ.7.82ಕ್ಕೆ ಇಳಿಕೆಯಾಗಿದೆ. ಸರಾಸರಿ ಕ್ಲೇಮ್ ವಿಲೇವಾರಿ ಸಮಯ 11.15 ದಿನಗಳಿಂದ 2.57 ದಿನಗಳಿಗೆ ಇಳಿದಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಒಟ್ಟಿನಲ್ಲಿ ಪಿಎಫ್ ಹಣ ಪಡೆಯುವ ನಿಯಮದಿಂದ ಹಿಡಿದು ನಿವೃತ್ತಿಯ ನಂತರ ಹಣ ಪಡೆಯುವ ವಿಧಾನ, ಕನಿಷ್ಠ ಬ್ಯಾಲೆನ್ಸ್ ಮತ್ತು ಡಿಜಿಟಲ್ ಸೇವೆಗಳವರೆಗೆ ಹಲವು ಮಹತ್ವದ ಬದಲಾವಣೆಗಳಿಗೆ EPFO ಮುಂದಾಗಿದೆ.ವಿಶೇಷವಾಗಿ ಗಾರ್ಮೆಂಟ್ಸ್ ಕಾರ್ಮಿಕರು ಸೇರಿದಂತೆ ಸಂಘಟಿತ ವಲಯದ ಉದ್ಯೋಗಿಗಳಿಗೆ ಈ ನಿರ್ಧಾರಗಳು ದೊಡ್ಡ ನಿರೀಕ್ಷೆ ಮೂಡಿಸಿವೆ.



